ಕಣಜ : ರೈತರಾಗಲಿ ಜಮೀನಿನ ಒಡೆಯರಾಗಲಿ ಇತರರಾಗಲಿ ಸ್ವಂತ ಉಪಯೋಗಕ್ಕೊ ಮಾರಾಟಕ್ಕಾಗಿಯೋ ದವಸಧಾನ್ಯವನ್ನು-ಮುಖ್ಯವಾಗಿ ಅದನ್ನು ಒಕ್ಕಿದ ಮೇಲೆ ಅಥವಾ ಅದರ ಸಿಪ್ಪೆ ತೆಗೆದ ಮೇಲೆ-ಸಂಗ್ರಹಿಸಿಡಲು (ಸಾಮಾನ್ಯವಾಗಿ ಖಾಸಗಿಯಾಗಿ) ನಿರ್ಮಿಸಿದ 

ಕಟ್ಟಡ (ಗ್ರ್ಯಾನರಿ). ಪಣತ ಎಂದೂ ಇದನ್ನು ಕರೆಯುವುದುಂಟು. ನೆಲದ ಅಡಿಯಲ್ಲಿ ಕಟ್ಟಲಾದ ಕಣಜವನ್ನು ಹಗೇವು ಎನ್ನುವುದು ವಾಡಿಕೆ. ಜೋಳವನ್ನು ಹಗೇವಿನಲ್ಲೂ ಬತ್ತವನ್ನು ಕಣಜದಲ್ಲೂ ಸಾಮಾನ್ಯವಾಗಿ ತುಂಬಿಡುತ್ತಾರೆ. ಹೀಗೆಯೇ ಕೆಲವು ಧಾನ್ಯಗಳನ್ನು ಕಣಜದಲ್ಲೂ 

ಇನ್ನು ಕೆಲವನ್ನು ಹಗೇವಿನಲ್ಲೂ ಸಂಗ್ರಹಿಸುವುದು ರೂಢಿಯಾಗಿ ಬಂದಿದೆ.
ಧಾನ್ಯಕ್ಕೆ ತೇವ ಹತ್ತದಂತೆಯೂ ಇಲಿ ಹೆಗ್ಗಣ ಪಕ್ಷಿಗಳೇ ಮುಂತಾದವು ತಿನ್ನದಂತೆಯೂ ಹುಳು ಬೀಳದಂತೆಯೂ ಅದನ್ನು ರಕ್ಷಿಸಿಡುವುದೇ ಕಣಜದ ಮುಖ್ಯ ಉದ್ದೇಶ. ಒಂದು ಕುಟುಂಬದ ಉಪಯೋಗಕ್ಕೆ ತಕ್ಕಷ್ಟು ಧಾನ್ಯ ಸಂಗ್ರಹಮಾಡಬಹುದಾದ ಸಣ್ಣ ಕಣಜದಿಂದ ಹಿಡಿದು 

ದೊಡ್ಡ ವ್ಯಾಪಾರಿಗಳ ಇಲ್ಲವೆ ಸಂಘ ಸಂಸ್ಥೆಗಳ ಒಡೆತನದಲ್ಲಿ ಇರುವ ಭಾರಿಯ ಕಣಜದವರೆಗೆ ಅಗತ್ಯಾನುಗುಣವಾಗಿ ಇದರ ಗಾತ್ರ ವ್ಯತ್ಯಾಸವಾಗುತ್ತದೆ. ಕಣಜಗಳು ಇಂದಿನ ಆರ್ಥಿಕ ಕ್ಷೇತ್ರದಲ್ಲಿ ಬಹಳ ಮಹತ್ತ್ವದ ಪಾತ್ರ ವಹಿಸಿರುತ್ತವೆ. ಆಧುನಿಕ ನಾಗರಿಕ ಜೀವನಕ್ಕೆ ಇವು 

ಬಹಳ ಆವಶ್ಯಕ. ಪ್ರಪಂಚದ ಬೇರೆ ಬೇರೆ ದೇಶಗಳು ಹೇರಳವಾಗಿ ಬೆಳೆಯುತ್ತಿರುವ ಕಾಳುಗಳನ್ನು ಸಂಗ್ರಹಿಸಿಟ್ಟುಕೊಂಡು ಕೊರತೆಯ ರಾಷ್ಟ್ರಗಳಿಗೆ ಆಹಾರ ಪುರೈಸುವಂತೆ ಮಾಡುವುದರಲ್ಲಿ ಕಣಜಗಳು ಬಹಳ ಸಹಾಯಕ.
ಕಣಜದ ಗಾತ್ರ ಮತ್ತು ರಚನೆಗಳು ಅದರಲ್ಲಿ ಸಂಗ್ರಹಿಸಿಡಬೇಕಾದ ಧಾನ್ಯದ ಪ್ರಮಾಣವನ್ನು ಅವಲಂಬಿಸಿರುತ್ತವೆ. ಆಧುನಿಕ ಕಣಜಗಳನ್ನು ಮೂರು ವಿಧವಾಗಿ ವಿಂಗಡಿಸಬಹುದು. (1) ತಾತ್ಕಾಲಿಕ ಕಣಜಗಳು, (2) ಒಂದು ಸ್ಥಳದಿಂದ ಬೇರೊಂದು ಸ್ಥಳಕ್ಕೆ ಒಯ್ಯಬಹುದಾದ 

ಕಣಜಗಳು ಮತ್ತು (3) ಶಾಶ್ವತವಾದ ಕಣಜಗಳು ಹಾಗೂ ಧಾನ್ಯವನ್ನು ಮೇಲೆ ಎತ್ತಿ ಸಂಗ್ರಹಿಸುವ ಕಟ್ಟಡಗಳು (ಎಲಿವೇಟರ್ ಬಿಲ್ಡಿಂಗ್ಸ್‌).
ತಾತ್ಕಾಲಿಕವಾಗಿ ಧಾನ್ಯ ಸಂಗ್ರಹಿಸಿಡಬೇಕಾದಾಗ ನೆಲದ ಮೇಲೆ ನೀರು ಅಂಟದಂಥ ಕಾಗದವನ್ನು ಹರವಿ ಅದರ ಮೇಲೆ ಧಾನ್ಯವನ್ನಿಡಬಹುದು. ಕಂಬಗಳನ್ನು ನೆಲದಲ್ಲಿ ಹುಗಿದು ಅದರ ಸುತ್ತಲೂ ಮರದ ಹಲಗೆಯನ್ನೋ ತಗಡುಗಳನ್ನೋ ಜೋಡಿಸಿ ಅಲ್ಲಿ ಧಾನ್ಯ 

ಸಂಗ್ರಹಿಸಬಹುದು. ಆದರೆ ಇಂಥ ವಿಧಾನದಿಂದ ಧಾನ್ಯಕ್ಕೆ ಸಾಕಷ್ಟು ಸಂರಕ್ಷಣೆ ದೊರೆಯಲಾರದು. 
ಒಂದು ಸ್ಥಳದಿಂದ ಬೇರೊಂದು ಸ್ಥಳಕ್ಕೆ ಒಯ್ಯಬಹುದಾದ ಕಣಜವನ್ನು ಮರ ಅಥವಾ ತಗಡಿನಿಂದ ಮಾಡಿರುತ್ತಾರೆ. ಕಣಜದ ಕೆಳಭಾಗದಲ್ಲಿ ಮರದ ತುಂಡುಗಳಿದ್ದು ಅವುಗಳ ನೆರವಿನಿಂದ ಕಣಜವನ್ನು ಒಂದು ಕಡೆಯಿಂದ ಬೇರೊಂದು ಕಡೆಗೆ ಒಯ್ಯಬಹುದು. ಇಂಥ ಕಣಜದಲ್ಲಿ 

ಸು. 24,000 ದಿಂದ 72,000 ಲೀಟರುಗಳವರೆಗೆ ಕಾಳು ತುಂಬಬಹುದು. 
ಸತುವು ಲೇಪಿತ (ಗ್ಯಾಲ್ವನೈಸ್ಡ್‌) ತಗಡಿನ ಕಣಜಗಳು ಕಾಳನ್ನು ಸಂಗ್ರಹಿಸಿಡಲು ಉಪಯುಕ್ತವಾಗಿವೆ. ಇವು ಸು.3 ಮೀಟರುಗಳಿಗಿಂತ ಕಡಿಮೆವ್ಯಾಸವುಳ್ಳವು. ಹವೆಯಿಂದ ಇವಕ್ಕೆ ಧಕ್ಕೆ ತಗಲದಂತೆ ಇವು ಸಾಕಷ್ಟು ಗಟ್ಟಿಯಾಗಿರುವಂತೆ ಮಾಡುವುದು ಒಳ್ಳೆಯದು. ತಗಡಿನ 

ಗುಣಕ್ಕೆ ತಕ್ಕಂತೆ ಕಣಜಗಳ ಬಾಳಿಕೆ. ಬಹಳ ದಿವಸಗಳವರೆಗೆ ಕಣಜ ಬಾಳಬೇಕಾದರೆ ತಗಡು ಅತಿ ಕಡಿಮೆಯೆಂದರೆ 20 ಗೇಜಿನದಾದರೂ ಇರಬೇಕು.
ಶಾಶ್ವತ ಕಣಜಗಳು ದೊಡ್ಡ ಕಟ್ಟಡಗಳು. ಬೃಹದ್ಗಾತ್ರದಲ್ಲಿ ಧಾನ್ಯೋತ್ಪಾದನೆ ಮಾಡುವ ಅಮೆರಿಕದಲ್ಲಿ ಇವು ವಿಶೇಷ. ಬೆಳೆದ ಧಾನ್ಯವನ್ನು ಅಲ್ಪವೆಚ್ಚದಲ್ಲಿ ಇಲ್ಲಿ ಸಂಗ್ರಹಿಸಿಡಬಹುದಲ್ಲದೆ ಧಾನ್ಯದ ಮೇಲೆ ಸಾಲವನ್ನೂ ಪಡೆಯಬಹುದು. ಅಮೆರಿಕದಲ್ಲಿ ಇವು ರೈತರ 

ಮನೆಗಳಲ್ಲೂ ಹಳ್ಳಿಪಟ್ಟಣಗಳಲ್ಲೂ ಧಾನ್ಯಪೇಟೆಗಳಲ್ಲೂ ಉಂಟು. ಧಾನ್ಯವನ್ನು ಮೇಲೆತ್ತಿ ಕಣಜಗಳಲ್ಲಿ ತುಂಬುವ ಸಾಧನಗಳನ್ನೂ ಜೋಡಿಸಲಾಗಿರುತ್ತದೆ. ಮೇಲೆತ್ತಿಗೆಗಳಲ್ಲಿ (ಎಲಿವೇಟರ್ಸ್‌) ಎರಡು ವಿಧ. ಮೊದಲನೆಯದು ಚಿಕ್ಕದು, ಒಂದು ಕಡೆಯಿಂದ ಮತ್ತೊಂದು ಕಡೆಗೆ 

ಒಯ್ದು ಉಪಯೋಗಿಸುವಂಥದು. ಉಗ್ರಾಣದ ಭಾಗವಾಗಿಯೇ ಒಂದೇ ಸ್ಥಳದಲ್ಲಿ ಇರತಕ್ಕದ್ದು ಎರಡನೆಯ ಬಗೆ. ಮೇಲೆತ್ತಿಗೆ ಒಂದು ಪಟ್ಟೆ. ಇದಕ್ಕೆ ತುದಿ ಅಥವಾ ಕೊನೆ ಇರುವುದಿಲ್ಲ. ಈ ಪಟ್ಟೆಗೆ ಚೌಕವಾದ ಇಲ್ಲವೆ ಗಿ ಆಕಾರದ ಬಕೆಟ್ಟುಗಳನ್ನು ಕೂಡಿಸಿರುತ್ತಾರೆ. ಗಾಲಿಗಳ 

ಮೇಲೆ ಇರುವ ಈ ಪಟ್ಟೆ ಕೆಳಗಿನಿಂದ ಮೇಲೆ ಸುತ್ತುತ್ತಿರುತ್ತದೆ. ಅದರ ಕೆಳಬದಿಯಲ್ಲಿ ಒಂದು ತಗ್ಗುಂಟು. ಧಾನ್ಯವನ್ನು ಅದರಲ್ಲಿ ಸುರಿಯುತ್ತಾರೆ. ಪಟ್ಟಿ ತಿರುಗುವಾಗ ಅದರ ಬಕೆಟ್ಟುಗಳು ಧಾನ್ಯವನ್ನು ತುಂಬಿಕೊಂಡು ಮೇಲೆ ಏರುತ್ತ ಉಗ್ರಾಣದ ಮೇಲ್ಬದಿಯಲ್ಲಿ ಅದನ್ನು ಸುರಿದು 

ಬೇರೊಂದು ಬದಿಯಿಂದ ಕೆಳಗೆ ಬರುತ್ತವೆ. ಇದು ವಿದ್ಯುತ್ತಿನ ಮೋಟಾರಿನ ಅಥವಾ ಸಣ್ಣ ಎಂಜಿನಿನ ಸಹಾಯದಿಂದ ತಿರುಗುತ್ತದೆ. ಸಣ್ಣ ಸಾಧನಗಳು 5-10 ಮೀ ಉದ್ದವಾಗಿರುತ್ತವೆ. ಇನ್ನೊಂದು ಬಗೆಯ ಮೇಲೆತ್ತಿಗೆ ಒಂದು ತಿರುಪು ಸಾಧನ. ಇದರ ಉದ್ದ 10 ಮೀ. ಕಣಜ 22

-44 ಮೀ ಗಳವರೆಗೆ ಎತ್ತರವಾಗಿರುತ್ತದೆ.
ಕಣಜಗಳನ್ನು ಮರ, ಲೋಹ ಇಲ್ಲವೆ ಕಾಂಕ್ರೀಟಿನಿಂದ ಕಟ್ಟುತ್ತಾರೆ. ಮರದ ಕಣಜ ಹೆಚ್ಚು ಬಾಳಿಕೆ ಬರುವುದಿಲ್ಲ. ಆದ್ದರಿಂದ, ಕಾಂಕ್ರೀಟಿನ ಮತ್ತು ಲೋಹದ ಕಣಜಗಳೇ ಬಳಕೆಯಲ್ಲಿವೆ. ಗ್ರಾಮೀಣ ಪ್ರದೇಶದ ಕಣಜಗಳಲ್ಲಿ 50,000 ಲೀಟರಿನವರೆಗೂ ಧಾನ್ಯ ತುಂಬಬಹುದು. 

ರೈತ ಬೆಳೆಯುವ ಎಲ್ಲ ಧಾನ್ಯವೂ ಸಾಮಾನ್ಯಾವಾಗಿ ಮಾರಾಟಕ್ಕೆ ಮುಂಚೆ ಕಣಜಗಳಲ್ಲಿ ಸಂಗ್ರಹವಾಗಿರುತ್ತದೆ. ಧಾನ್ಯವನ್ನು ತೂಕ ಮಾಡಿ ಅದೇ ಮಾದರಿಯ ಧಾನ್ಯ ಇರುವಲ್ಲಿ ಅದನ್ನು ಸೇರಿಸುತ್ತಾರೆ. ಸಾಮಾನ್ಯವಾಗಿ ಕಣಜದ ಮಾಲೀಕರೆ ಅದನ್ನು ಕೊಳ್ಳುವುದುಂಟು. 

ಧಾನ್ಯಪೇಟೆಗಳಲ್ಲಿ ಇರುವ ಕಣಜಗಳು ಬಹಳದೊಡ್ಡವು, 480 ಲಕ್ಷ ಲೀಟರ್ ಕಾಳು ಹಿಡಿಯುತ್ತವೆ. ಅಮೆರಿಕದ ಮಿನಿಯಪೊಲಿಸ್ನ 69 ಕಣಜಗಳು 44,640 ಲಕ್ಷ ಲೀಟರ್ ಧಾನ್ಯವನ್ನು ತುಂಬುವಷ್ಟು ದೊಡ್ಡವಾಗಿವೆ. 
ಒಳ್ಳೆಯ ಕಣಜದ ಗುಣಗಳು : ಕಣಜಗಳು ಗಟ್ಟಿಮುಟ್ಟಾಗಿ ಇರಬೇಕು. ಒಳಗಿರುವ ಧಾನ್ಯ ಕಣಜದ ಗೋಡೆಯನ್ನೂ ತಳವನ್ನೂ ತನ್ನ ಭಾರದಿಂದ ಒತ್ತುತ್ತದೆ. 4.2 ಮೀ ವ್ಯಾಸ ಹಾಗೂ 2.4 ಮೀ ಎತ್ತರವುಳ್ಳ ಕಣಜದಲ್ಲಿ ಮುಸುಕಿನ ಜೋಳವನ್ನು ಇಟ್ಟರೆ ಕಣಜದ ತಳದಲ್ಲಿ ಪ್ರತಿ 

ಚ. ಮೀಟರಿನ ಮೇಲೆ ಸು. 2,000 ಕಿಗ್ರಾಂ ಭಾರ ಬೀಳುತ್ತದೆ. ಗೋಡೆಯ ಕೆಳಭಾಗದಲ್ಲಿ ಪ್ರತಿ ಚ. ಮೀಟರಿನ ಮೇಲೆ 750 ಕಿಗ್ರಾಂ ಒತ್ತಡ ಉಂಟಾಗುತ್ತದೆ. ಧಾನ್ಯದ ಎತ್ತರ ಹೆಚ್ಚಾದಂತೆ ಈ ಒತ್ತಡ ಇನ್ನೂ ಹೆಚ್ಚು. ಆದ್ದರಿಂದ ಕಣಜದ ಕಟ್ಟಡ ಇದನ್ನು ತಡೆದು ನಿಲ್ಲುವಷ್ಟು 

ಗಟ್ಟಿಯಾಗಿರಬೇಕು.
ಕಣಜಗಳು ಹವೆಯಿಂದ ಬಾಧಿತವಾಗದಂತೆ ಇರಬೇಕು. ನೀರು ಇಲ್ಲವೆ ಆದರ್ರ್‌ತೆ ಒಳಗೆ ಸೇರದ ಹಾಗೆ ಅದನ್ನು ಕಟ್ಟಿರಬೇಕು. ಮಾಳಿಗೆ ಸೋರುವುದು, ಗೋಡೆ ಬಿರುಕು ಬಿಟ್ಟಿರುವುದು, ಬಾಗಿಲುಗಳ ಸಂದಿಯಿಂದ ನೀರು ಒಳಗೆ ಸೇರುವುದು, ನೆಲ ಹಸಿಯನ್ನು 

ಹೀರಿಕೊಳ್ಳುವಂಥದು, ನೆಲದ ಮೇಲೆ ಇರುವ ಕಾಳು ಹಸಿ ಇಂಗಿಸಿಕೊಳ್ಳುವುದು-ಇವೇ ಧಾನ್ಯ ಕೆಡಲು ಮುಖ್ಯ ಕಾರಣಗಳು. ಕಣಜದ ಸುತ್ತಲೂ ಬಿದ್ದ ನೀರು ದೂರ ಹರಿದು ಹೋಗುವಂತೆ ವ್ಯವಸ್ಥೆ ಇರಬೇಕು.
ಕಣಜದ ಧಾನ್ಯಕ್ಕೆ ಹುಳುಗಳು ಹತ್ತದಂತಿರಬೇಕು. ಧಾನ್ಯ ಹಸಿಯಾಗಿ ಅಥವಾ ಬೆಚ್ಚಗೆ ಇದ್ದರೆ ಹುಳು ತೀವ್ರ ಅಂಟಿಕೊಳ್ಳುತ್ತದೆ. ಗೋಡೆಗಳಲ್ಲಿ ಬಿರುಕು ಉಂಟಾಗಿದ್ದರೂ ಗೋಡೆಯ ಸ್ವಲ್ಪ ಭಾಗ ಒಳಗಡೆಗೆ ಹೆಚ್ಚು ಹಾಯ್ದಿದ್ದರೂ ಕಣಜದಿಂದ ಧಾನ್ಯ ತೆಗೆದಾಗ ಸ್ವಲ್ಪ ಭಾಗ 

ಇಂಥ ಸ್ಥಳಗಳಲ್ಲಿ ಉಳಿದುಕೊಳ್ಳುತ್ತದೆ. ಇದಕ್ಕೆ ಹುಳುಗಳು ಹತ್ತುತ್ತವೆ. ಇವು ಕಣಜದಲ್ಲಿಯೇ ಉಳಿದು ಬೆಳೆಯುತ್ತ ಹೋಗಿ ಕಣಜದಲ್ಲಿ ಹೊಸ ಧಾನ್ಯ ಹಾಕಿದಾಗ ಅದಕ್ಕೆ ಸುಲಭವಾಗಿ ಹತ್ತಿಬಿಡುತ್ತವೆ. ಕಣಜದ ಗೋಡೆಗಳು ಮತ್ತು ಕಣಜದಲ್ಲಿಯ ನೆಲ ಗಾಳಿ ಒಳಗೆ ಬರದಂತೆ 

ಭದ್ರವಾಗಿರುವುದು ಒಳ್ಳೆಯದು. ಇಲಿ, ಹೆಗ್ಗಣ, ಪಕ್ಷಿ ಮುಂತಾದವು ಒಳಗೆ ಪ್ರವೇಶಿಸದಂತೆ ಕಣಜಗಳನ್ನು ಕಟ್ಟಬೇಕು. ಇಂಥ ಪ್ರಾಣಿಗಳು ಬಾಗಿಲ ಮೂಲಕ ಪ್ರವೇಶಿಸುವುದು ಸಾಧ್ಯವಾಗದಂತಿರಬೇಕು. 
ಸುತ್ತ ಇಳಿಜಾರು ಇದ್ದು ನೀರು ಅಲ್ಲಿಂದ ದೂರ ಹರಿದುಹೋಗುವಂಥ ಎತ್ತರದ ನೆಲವೇ ಕಣಜ ಕಟ್ಟಲು ಯೋಗ್ಯ ಸ್ಥಳ. ಕಣಜಗಳ ನಕ್ಷೆಗಳನ್ನು ತಯಾರಿಸುವಾಗ ಅದಕ್ಕೆ ಬೇಕಾಗುವ ಸ್ಥಳವನ್ನು ನಿರ್ದಿಷ್ಟಪಡಿಸಬೇಕಾಗುತ್ತದೆ. ಹೀಗೆ ನಿರ್ದಿಷ್ಟ ಪಡಿಸುವಾಗ ಧಾನ್ಯ ಸಂಗ್ರಹಕ್ಕೆ 

ಬೇಕಾಗುವ ಸ್ಥಳವನ್ನಷ್ಟೇ ಲಕ್ಷ್ಯದಲ್ಲಿಟ್ಟುಕೊಳ್ಳದೆ ಇತರ ಕೆಲಸಗಳಿಗೆ ಅಂದರೆ ಧಾನ್ಯವನ್ನು ಸ್ವಚ್ಛ ಮಾಡುವುದು, ವಿಂಗಡಿಸುವುದು, ಹುಳು ಹತ್ತದಂತೆ ಔಷಧಿ ಹೊಡೆಯುವುದು ಮೊದಲಾದ ಕಾರ್ಯಗಳಿಗೆ ಬೇಕಾಗುವ ಹೆಚ್ಚಿನ ಸ್ಥಳದ ವ್ಯವಸ್ಥೆಯನ್ನೂ ಯೋಚಿಸಬೇಕು. 

ಕಳ್ಳತನಕ್ಕೆ ಆಸ್ಪದವಿಲ್ಲದ ಹಾಗೆ ಕಣಜದ ವ್ಯವಸ್ಥೆ ಇರುವುದು ಒಳ್ಳೆಯದು.
ಕಣಜದಲ್ಲಿರುವ ಧಾನ್ಯಕ್ಕೆ ತೇವ ಹತ್ತದಂತೆ ಮಾಡಬೇಕಾದರೆ ಈ ಮುಂದಿನ ಕ್ರಮಗಳನ್ನು ಕೈಗೊಳ್ಳಬೇಕು: 1. ಗೋಡೆ, ಮಾಳಿಗೆ, ಬಾಗಿಲು ಹಾಗೂ ಕಿಟಕಿಗಳು ಬಿಗಿಯಾಗಿರಬೇಕು. 2. ನೆಲಕ್ಕೆ ತೇವ ಹತ್ತಬಾರದು. 3. ಗೋಡೆ ಮತ್ತು ಪಾಯಗಳ ನಡುವೆ ಗಟ್ಟಿಯಾದ ಟಾರು 

ಹಾಕಬೇಕು. ಇದರಿಂದ ನೆಲದ ತೇವ ಗೋಡೆಯೊಳಗಿಂದ ಮೇಲಕ್ಕೆ ಏರುವುದಿಲ್ಲ. 4. ಪಾಯದ ಗೋಡೆ ಕಟ್ಟಡದ ಹೊರಬದಿಗೆ ಹಾದಿರ ಬಾರದು. 5. ಕಟ್ಟಡದಿಂದ ನೀರು ದೂರ ಹರಿದು ಹೋಗಬೇಕು.
ಕಣಜದಲ್ಲಿ ಇಲಿಗಳು ಹಾಗೂ ಪಕ್ಷಿಗಳು ಪ್ರವೇಶಿಸದ ಹಾಗೆ ಇರಬೇಕಾದರೆ ಈ ಕ್ರಮಗಳನ್ನು ಕೈಗೊಳ್ಳಬೇಕು: 1. ಕಣಜದ ನೆಲ ಭೂಮಿಗಿಂತ ಸ್ವಲ್ಪ ಎತ್ತರದಲ್ಲಿ ಇರಬೇಕು, 2. ಕಣಜದೊಳಗಿನ ನೆಲ ಕಾಂಕ್ರೀಟಿನಿಂದಲೂ ಕಣಜದ ಪಾಯದ ಗೋಡೆಯನ್ನು ಗಟ್ಟಿಯಾಗಿಯೂ 

ಕಟ್ಟಿರಬೇಕು, 3. ಗೋಡೆಯಲ್ಲಿಯ ತೂತುಗಳನ್ನು ಸಣ್ಣ ಕಣ್ಣುಗಳುಳ್ಳ ಜಾಳಿಗೆಯಿಂದ ಮುಚ್ಚಬೇಕು, 4. ಕಣಜದ ಮೇಲ್ಭಾಗದಲ್ಲಿ ಜಾಳಿಗೆಯನ್ನು ಇಲ್ಲವೆ ಕಬ್ಬಿಣದ ತಗಡನ್ನು ಹಾಕಬೇಕು, 5. ನೆಲದಿಂದ 60 ಸೆಂಟಿಮೀಟರುಗಳ ಮೇಲೆ ಕಟ್ಟಡದ ಸುತ್ತಲೂ ಹೊರಬದಿಗೆ 20 

ಸೆಂಟಿಮೀಟರ್ ಅಗಲದ ಸತುಲೇಪಿತ ತಗಡನ್ನು ಹಾಕಬೇಕು, 6. ಬಾಗಿಲುಗಳನ್ನು ಇಲಿಗಳು ಕಡಿಯದಂತೆ ಅವುಗಳ ಸುತ್ತಲೂ ಕಬ್ಬಿಣದ ತಗಡನ್ನು ಹಾಕಬೇಕು. 
ಎರಡನೆಯ ಮಹಾಯುದ್ಧದ ಕಾಲದಿಂದೀಚೆಗೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಕಣಜದೊಳಗೆ ವಾತನಿಯಂತ್ರಿಸುವ ವ್ಯವಸ್ಥೆಯೂ ಹೆಚ್ಚಾಗಿ ಬಳಕೆಗೆ ಬಂದಿದೆ.      	(ಆರ್.ಎಫ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ